ವೆಸ್ಪೂಚಿ, ಅಮೆರಿಗೊ 1454-1512. ಇಟಲಿಯ ನಾವಿಕ. ಜನ್ಮಸ್ಥಳ ಫ್ಲಾರೆನ್ಸ್. ಪ್ರಸಿದ್ಧ ಮೆಡಿಸಿ ಮನೆತನದ ಕೈಕೆಳಗೆ ವ್ಯಾಪಾರ ನಡೆಸಲಾ ರಂಭಿಸಿದ. ಕೆಲಕಾಲದ ಮೇಲೆ, ಕೊಲಂಬಸ್ ಪ್ರಾರಂಭಿಸಿದ ಹೊಸ ಭೂ ಸಂಶೋಧನೆ ಇವನ ಮನಸ್ಸನ್ನು ಸೆಳೆಯಿತು. 1492ರಲ್ಲಿ ಸೆವಿಲ್‍ಗೆ ಹೋಗಿ ನೆಲೆಸಿದ. ಅಲಾನ್ಸೊ ಡ ಒಜೇಡ ಎಂಬ ಸಂಶೋಧಕನೊಡನೆ ಅಮೆರಿಕಕ್ಕೆ ಹೊರಟ(1499). ಅದರ ತೀರವನ್ನು ತಲುಪುವುದಕ್ಕೆ ಮುಂಚೆಯೇ ಇಬ್ಬರೂ ಬೇರೆಯಾದರು. ಒಜೇಡ ಪಶ್ಚಿಮಾಭಿಮುಖವಾಗಿ ಹೊರಟು ಅಮೆಜಾನ್ ನದೀಮುಖವನ್ನು ಕಂಡು ಹಿಡಿದ. 1500ರಲ್ಲಿ ಸ್ಪೇನ್‍ಗೆ ಹಿಂದಿರುಗಿದ. ಮರುವರ್ಷ ದಕ್ಷಿಣ ಅಮೆರಿಕದ ಪೂರ್ವ ತೀರದಲ್ಲಿ ಇನ್ನೂ ಹೆಚ್ಚು ಸಂಶೋಧನೆ ನಡೆಸುವ ಉದ್ದೇಶದಿಂದ ಪೋರ್ಚು ಗಲ್ ಸರ್ಕಾರದ ನೌಕರನಾಗಿ ದಕ್ಷಿಣ ಅಮೆರಿಕಕ್ಕೆ ಹೊರಟು ಲಾಪ್ಲಾಟ ನದೀಮುಖವನ್ನು ತಲುಪಿದ. ಇವನು ದಕ್ಷಿಣ ಅಮೆರಿಕ ತೀರದಲ್ಲಿ  ಸು. 6000 ಮೈಲಿಗಳ ದೂರ ಸಂಶೋಧನೆ ನಡೆಸಿ, ದಕ್ಷಿಣ ಅಮೆರಿಕ ಏಷ್ಯದೊಡನೆ ಯಾವುದೇ ಭೂಮಾರ್ಗ ಹೊಂದಿಲ್ಲ ಎಂಬುದನ್ನು ಖಚಿತವಾಗಿ ತಿಳಿಸಿದ. ಇವನ ಸಂಶೋಧನೆಗಳಿಂದ ರೇಖಾಂಶ, ರೇಖಾ ರಚನೆ, ಭೂಮಿಯ ಸ್ವರೂಪವಿವರಣೆ ಮುಂತಾದುವುಗಳಿಗೆ ಬಹಳ ಉಪಯೋಗವುಂಟಾಯಿತು. 1502ರಲ್ಲಿ ಇವನು ಹಿಂತಿರುಗಿದ. ಅಮೆರಿಗೊ ಎಂಬ ಶಬ್ದವೇ ಈಗ ಅಮೆರಿಕ ಎಂದಾಗಿದೆ. ದಕ್ಷಿಣ ಅಮೆರಿಕದಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಮಲೇರಿಯ ಜಾಡ್ಯದಿಂದ 1512ರಲ್ಲಿ ನಿಧನಹೊಂದಿದ.								
		*

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ